Shankar Nag: ಶಂಕರ್ ನಾಗ್ ಆಕ್ಸಿಡೆಂಟ್ ಆಗುವುದು ಮೊದಲೇ ತಿಳಿದಿತ್ತು, ತಮ್ಮನ ಸಾವಿನ ಬಗ್ಗೆ ಮಾತನಾಡಿದ ಅನಂತ್ ನಾಗ್.
ಶಂಕರ್ ನಾಗ್ ರವರ ಸಾವಿನ ಬಗ್ಗೆ ತಿಳಿಸಿದ ಅನಂತ್ ನಾಗ್, ವಿಜಯದಶಮಿಯಂದೇ ಆಕ್ಸಿಡೆಂಟ್.
Ananth Nag About Shankar Nag: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಶಂಕರ್ ನಾಗ್ (Shankar Nag) ಅಗಲಿ ಬಹಳ ವರ್ಷಗಳೇ ಆದರೂ ಇನ್ನು ಅಭಿಮಾನಿಗಳ ಮನದಲ್ಲಿ ನೆನಪಾಗಿ ಉಳಿದಿದ್ದಾರೆ. ಅಭಿಮಾನಿಗಳು ಆಟೋರಾಜ, ಕರಾಟೆ ಕಿಂಗ್ ಎಂದು ಪ್ರೀತಿಯಿಂದಲೇ ಕರೆಯುತ್ತಿದ್ದ ಶಂಕರ್ ನಾಗ್ ನಮ್ಮನ್ನು ಅಗಲಿ ಇಂದಿಗೆ 33 ವರ್ಷಗಳು ಕಳೆದಿದೆ.
ಸೆಪ್ಟೆಂಬರ್ 30, ಶಂಕರ್ ನಾಗ್ ನಿಧನರಾದ ದಿನವಾಗಿದ್ಧು. ಚಿಕ್ಕ ವಯಸ್ಸಿಗೆ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿ 35ನೇ ವಯಸ್ಸಿಗೆ ಶಂಕರ್ ನಾಗ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು. ಶಂಕರ್ ನಾಗ್ ಅವರ ಅಗ್ಗಳಿಕೆ ಇಡೀ ದೇಶದ ಚಿತ್ರರಂಗಕ್ಕೆ ಅಪಾರವಾದ ನಷ್ಟವನ್ನ ಉಂಟುಮಾಡಿತ್ತು.
ಶಂಕರ್‌ನಾಗ್ ರವರನ್ನು ನೆನೆದು ಭಾವುಕರಾದ ಅನಂತ್ ನಾಗ್
ತಮ್ಮ ಎಂದರೆ ಅಣ್ಣ ಅನಂತ್ ನಾಗ್ (Anant Nag) ಅವರಿಗೆ ಬಹಳ ಪ್ರೀತಿ. ಇಂದಿಗೂ ಅವರನ್ನು ನೆನೆದು ಕಣ್ಣೀರಿಡುತ್ತಾರೆ. 30 ಸೆಪ್ಟೆಂಬರ್ 1990 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಚಿತ್ರದುರ್ಗದ ಅನಗೋಡು ಬಳಿ ಶಂಕರ್ ನಾಗ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಶಂಕರ್ ನಾಗ್ ನಿಧನರಾಗುತ್ತಾರೆ.
ಅವರ ಅಗಲಿಕೆಯನ್ನು ಕುಟುಂಬದವರು ಮಾತ್ರವಲ್ಲ, ಕನ್ನಡಿಗರು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಅನಂತ್ ನಾಗ್ ಅವರು ಶಂಕರ್ ನಾಗ್ ಸಾವಿನ ಬಗ್ಗೆ ನ್ಯೂಸ್ ಫಸ್ಟ್ ವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕೊಂದು ಈಗ ವೈರಲ್ ಆಗುತ್ತಿದೆ.
ತಂದೆಗೆ ಶಂಕರನ ಸಾವಿನ ಆಘಾತ ತಡೆದುಕೊಳ್ಳಲಾಗುತ್ತಿರಲಿಲ್ಲ
ದೇವರಿಗೆ ಒಂದು ವಿಚಾರದಲ್ಲಿ ನಾನು ಕೈ ಮುಗಿಯಬೇಕು. ನಮ್ಮ ತಂದೆಯವರು 1987ರಲ್ಲಿ ನಿಧನರಾದರು. ಒಂದು ವೇಳೆ ಅವರು ಬದುಕಿದ್ದರೆ ಶಂಕರ್ ನಾಗ್ ಸಾವಿನ ಆಘಾತವನ್ನು ಅವರಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಇನ್ನೊಂದು ವಿಚಾರ ಹೇಳಲೇಬೇಕು. ಕಾಸರಗೋಡಿನ ಆನಂದಾಶ್ರಮದಲ್ಲಿ ಮಾತಾಜಿ ಕೃಷ್ಣಬಾಯಿ ಎಂಬುವವರು ಇದ್ದರು. ನಮ್ಮ ತಾಯಿ ಅವರ ಆಶ್ರಯದಲ್ಲೇ ಬೆಳೆದದ್ದು, ತಂದೆ ನಿಧನರಾದ ನಂತರ ಅಮ್ಮ, ಅವರೊಂದಿಗೆ ಹೋಗಿ ಇದ್ದರು.”
ಮಾತಾಜಿ ನೀಡಿದ ಮುನ್ಸೂಚನೆ ನನಗೆ ಅರ್ಥವೇ ಆಗಿರಲಿಲ್ಲ
”ಒಮ್ಮೆ ನಾವು ಆಶ್ರಮಕ್ಕೆ ಹೋದಾಗ ಅವರು ನನ್ನನ್ನು ಕರೆದರು. ಇನ್ನು ರಾಮನಾಮ ಹಚ್ಚು, ನೀನು ಪ್ರಸಾದ ಹಂಚಲು ಸಿದ್ಧತೆ ಮಾಡಿಕೋ ಎಂದರು. ನನಗೆ ಅವರ ಮಾತು ಅರ್ಥವಾಗಲಿಲ್ಲ. ಗಾಬರಿ ಆಯ್ತ, ಯಾರಿಗೆ ಏನಾಗುವುದೋ ಎನಿಸಿತು. ಅವರಿಗೆ ಆ ಶಕ್ತಿ ಇತ್ತು. ಅಂದು ಮುನ್ಸೂಚನೆ ನೀಡಿದ್ದರು. 1988 ವಿಜಯದಶಮಿಯಂದು ಅವರು ಈ ಮಾತು ಹೇಳಿದ್ದರು.
ಮರುವರ್ಷ ಮಾತಾಜಿಯವರೇ ನಿಧನರಾದರು. ನಮಗೆ ವಿಷಯ ಗೊತ್ತಿರಲಿಲ್ಲ. ಅಮ್ಮ ನಮ್ಮಿಬ್ಬರನ್ನೂ ಕಾಸರಗೋಡಿಗೆ ಕರೆದರು. ನಾವಿಬ್ಬರೂ ಶೂಟಿಂಗ್‌ನಲ್ಲಿದ್ದೆವು, ಇದ್ದಕ್ಕಿದ್ದಂತೆ ಹೇಗೆ ಬರುವುದು ಎಂದು ನಾನು ಕೇಳಿದಾಗ, 2 ದಿನಗಳ ಮಟ್ಟಿಗಾದರೂ ಬಂದು ಹೋಗಿ, ನಾನು ನಿಮ್ಮನ್ನು ಇದುವರೆಗೂ ಏನೂ ಕೇಳಿಲ್ಲ, ಮುಂದೆ ಕೇಳುವುದೂ ಇಲ್ಲ ಎಂದು ಅಮ್ಮ ಪೋನ್ ಇಟ್ಟರು.”
‘ನನ್ನ ತಮ್ಮ ಶಂಕರ’ ಪುಸ್ತಕ ಬರೆದ ಅನಂತ ನಾಗ್
”ಅಮ್ಮನ ಮಾತಿನಂತೆ ಶಂಕರನ ಜೊತೆ ಅಲ್ಲಿಗೆ ಹೋಗಿದ್ದೆ. ಅಲ್ಲಿ ಹೋದಾಗ ಮಾತಾಜಿ ನಿಧನರಾದ ಸುದ್ದಿ ತಿಳಿಯಿತು. ನಾವು ಆನಂದಾಶ್ರಮಕ್ಕೆ ಹೋಗಿದ್ದು ವಿಜಯದಶಮಿಯಂದು (1989). ಮರು ವರ್ಷ, 1990 ವಿಜಯದಶಮಿಯಂದೇ ಶಂಕರನಿಗೆ ಆಕ್ಸಿಡೆಂಟ್ ಆಯ್ತು. ನಾನು ಅಮ್ಮನಿಗೆ ಕಾಲ್ ಮಾಡಿದ್ದೆ, ಎಲ್ಲರೂ ನನಗೆ ವಿಚಾರಿಸುತ್ತಿದ್ದಾರೆ, ನನಗೆ ಏನೂ ಗೊತ್ತಾಗ್ತಿಲ್ಲ ಎಂದೆ.
ಮಾತಾಜಿಯವರು 2 ವರ್ಷಗಳ ಹಿಂದೆಯೇ ನನಗೆ ತಿಳಿಸಿದ್ದರು ಎಂದು ಅಮ್ಮ ಅಂದು ಮಾತಾಜಿ ಹೇಳಿದ್ದನ್ನು ನೆನಪಿಸಿಕೊಂಡರು. ಈ ಎಲ್ಲಾ ವಿಚಾರವನ್ನು ಪುಸ್ತಕದಲ್ಲಿ ಬರೆದಿದ್ಧೇನೆ” ಎಂದು ಅನಂತ್ ನಾಗ್, ಶಂಕರ್ ನಾಗ್ ಅವರ ಕೊನೆಯ ದಿನಗಳನ್ನು ಈ ಸಂದರ್ಶನದಲ್ಲಿ ನೆನೆದಿದ್ದಾರೆ. ಅನಂತ್ ನಾಗ್, ‘ನನ್ನ ತಮ್ಮ ಶಂಕರ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಬಾಲ್ಯದಿಂದ ಶಂಕರ್ ನಾಗ್ ಸಾವಿನವರೆಗಿನ ಎಲ್ಲಾ ಪ್ರಮುಖ ವಿಚಾರಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ.