Asia Cup 2023: ಮೈದಾನದಲ್ಲಿ ಕೆಲಸ ಮಾಡುವ ಜನರಿಗೆ ಸಿರಾಜ್ ಕೊಟ್ಟ ಹಣ ಎಷ್ಟು…? ಇಡೀ ದೇಶವೇ ಮೆಚ್ಚಿದೆ ಈ ಕೆಲಸಕ್ಕೆ.
ಸಿರಾಜ್ ರವರ ಈ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ಭಾರಿ ಮೆಚ್ಚುಗೆ.
Asia Cup 2023: ಈ ಬಾರಿ ಏಷ್ಯಾಕಪ್ (Asia Cup) ಟೂರ್ನಿಯಲ್ಲಿ ನಡೆದ ಬಹುತೇಕ ಎಲ್ಲಾ ಪಂದ್ಯಗಳಿಗೂ ಮಳೆ ಅಡಚಣೆ ಉಂಟು ಮಾಡಿತ್ತು. ಅದರಲ್ಲೂ ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಿಗೆ ಮಳೆಯ ಅಬ್ಬರ ಹೆಚ್ಚಾಗಿತ್ತು. ಈ ವೇಳೆ ಮೈದಾನದ ಸಿಬ್ಬಂದಿ ಅತ್ಯಂತ ಚುರುಕುತನ ಮತ್ತು ವೇಗದಿಂದ ಕಾರ್ಯನಿರ್ವಹಿಸಿದರು. ದೇಶ, ವಿದೇಶಗಳ ಕ್ರಿಕೆಟ್ ಪ್ರೇಮಿಗಳು ಮತ್ತು ಮಾಜಿಹಾಲಿ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆಯಾಗಿತ್ತು.
ನಿಜ ಹೇಳಬೇಕೆಂದರೆ ಏಷ್ಯಾಕಪ್ ಪ್ರಶಸ್ತಿಯನ್ನು (Asia Cup 2023) ಗೆದ್ದಿದ್ದು ಭಾರತವೇ ಆದರೂ ಹೃದಯ ಗೆದ್ದದ್ದು ಮಾತ್ರ ಕೊಲೊಂಬೊ ಆರ್ ಪ್ರೇಮದಾಸ ಮೈದಾನದ (R.Premadasa Stadium, Colombo) ಸಿಬ್ಬಂದಿ. ಅನಿರೀಕ್ಷಿತ ಮಳೆ, ಗುಡುಗು-ಸಿಡಿಲುಗಳ ಆರ್ಭಟದ ನಡುವೆ ಮೈದಾನ ಮತ್ತು ಪಿಚ್ ಅನ್ನು ನೆನೆಯದಂತೆ ನೋಡಿಕೊಂಡ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾದರು.
ಕೊಲೊಂಬೊ ಆರ್ ಪ್ರೇಮದಾಸ ಮೈದಾನದ ಸಿಬ್ಬಂದಿಗಳ ಪರಿಶ್ರಮ
ಶ್ರೀಲಂಕಾದಲ್ಲಿ ನೆಡೆದ ಪ್ರತಿ ಪಂದ್ಯಕ್ಕೂ ಸಿಕ್ಕಾಪಟ್ಟೆ ಮಳೆ ಬೀಳುತ್ತಿತ್ತು, ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಯ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮವು ಏಷ್ಯಾಕಪ್ 2023 ಅನ್ನು ಮರೆಯಲಾಗದ ಚಮತ್ಕಾರವನ್ನಾಗಿ ಮಾಡಿದೆ. ಪಿಚ್ ಪರಿಪೂರ್ಣತೆಯಿಂದ ಸೊಂಪಾದ ಔಟ್ ಫೀಲ್ಡ್ಗಳವರೆಗೆ ರೋಮಾಂಚಕ ಕ್ರಿಕೆಟ್ ಕ್ಷಣಗಳಿಗೆ ಸಾಕ್ಷಿಯಾದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಮೊತ್ತ ನೀಡಿದ ಸಿರಾಜ್
ಉತ್ತಮ ಬೌಲಿಂಗ್ ಮೂಲಕ ಭಾರತದ ಗೆಲುವಿಗೆ ಕಾರಣರಾದ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಸಿರಾಜ್ ಈ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗೆ ನೀಡಿದರು. ಅವರಿಗೆ ಸಿಕ್ಕ ಪ್ರಶಸ್ತಿಯ ಮೊತ್ತ 5 ಸಾವಿರ ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 4 ಲಕ್ಷಕ್ಕೂ (4.15 ಲಕ್ಷ) ಅಧಿಕ ಮೊತ್ತ. ಸಿರಾಜ್ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು
ಮಳೆಯ ಹನಿ ನೆಲಕ್ಕೆ ಬೀಳುವುದಕ್ಕೂ ಮುನ್ನವೇ ಅತ್ಯಂತ ಚುರುಕುತನದಿಂದ ಕೆಲಸ ಮಾಡುವ ಮೂಲಕ ಇಡೀ ಮೈದಾನವನ್ನು ಕವರ್ಗಳಿಂದ ಮುಚ್ಚುತ್ತಿದ್ದರು. ಇದೀಗ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಏಷ್ಯಾಕಪ್ ಟೂರ್ನಿಯ ಪಂದ್ಯಗಳು ನಡೆದ ಮೈದಾನದ ಪಿಚ್ ಕ್ಯುರೇಟರ್ ಮತ್ತು ಸಿಬ್ಬಂದಿಗೆ ಬಿಸಿಸಿಐ 50 ಸಾವಿರ ಡಾಲರ್ ಬಹುಮಾನವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಘೋಷಿಸಿದೆ. ಅಂದರೆ, 42 ಲಕ್ಷಕ್ಕೂ ಅಧಿಕ ರೂಪಾಯಿ ನಗದು ಬಹುಮಾನ ಬಿಸಿಸಿಐ ಘೋಷಣೆ ಮಾಡಿದೆ.
ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು, ಟೂರ್ನಿ ಯಶಸ್ವಿಯಾಗಿದ್ದು ಅವರಿಂದಲೇ
ಬಹುಮಾನ ಘೋಷಣೆ ಮಾಡಿರುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ರಿಕೆಟ್ನ ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು. ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿಸಲು ಸಾಧ್ಯವಾಗಿಸಿದ ಅವರಿಗೆ 42 ಲಕ್ಷ ರೂಪಾಯಿ ಬಹುಮಾನ ಘೋಷಿಸಲು ಹರ್ಷವಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ಪೋಸ್ಟ್ನಲ್ಲಿ ಬರೆದಿದ್ದಾರೆ.
🏏🏟️ Big Shoutout to the Unsung Heroes of Cricket! 🙌
The Asian Cricket Council (ACC) and Sri Lanka Cricket (SLC) are proud to announce a well-deserved prize money of USD 50,000 for the dedicated curators and groundsmen at Colombo and Kandy. 🏆
Their unwavering commitment and…
— Jay Shah (@JayShah) September 17, 2023
ಭಾರತಕ್ಕೆ 8ನೇ ಏಷ್ಯಾಕಪ್ ಗೆದ್ದ ಸಂಭ್ರಮ
ಕೊಲೊಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ, ಮೊದಲು ಬ್ಯಾಟಿಂಗ್ ನಡೆಸಿತು. ಭಾರತ ತಂಡದ ಅದ್ಭುತ ಬೌಲಿಂಗ್ಗೆ ಶ್ರೀಲಂಕಾ ತತ್ತರಿಸಿತು.
ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್ಗಳಲ್ಲಿ ಕೇವಲ 50 ರನ್ಗಳಿಗೆ ಸರ್ವಪತನ ಕಂಡಿತು. ಈ ಸಣ್ಣ ಗುರಿಯನ್ನು ಬೆನ್ನತ್ತಿದ ಭಾರತ ತಂಡ 6.1 ಓವರ್ಗಳಲ್ಲಿ ಅಂದರೆ ಪವರ್ ಪ್ಲೇ ಮುಗಿಯುವುದರೊಂದಿಗೆ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗೆರೆ ದಾಟಿತು. ಇದರೊಂದಿಗೆ 10 ವಿಕೆಟ್ಗಳ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು. ಶುಭ್ಮನ್ ಗಿಲ್ 27 ರನ್, ಇಶಾನ್ ಕಿಶನ್ 23 ರನ್ ಬಾರಿಸಿ ಅಜೇಯರಾಗಿ ಉಳಿದರು.