Account Balance: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು…? ಬ್ಯಾಂಕ್ ಖಾತೆ ಇದ್ದವರ ಗಮನಕ್ಕೆ.
ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಕಡ್ಡಾಯ, ಇಲ್ಲವಾದಲ್ಲಿ ದಂಡ ಖಚಿತ.
Bank Account Minimum Balance: ಬಹುತೇಕ ಬ್ಯಾಂಕ್ಗಳ ಸೇವಿಂಗ್ಸ್ ಅಕೌಂಟ್ಗಳಲ್ಲಿ ಕನಿಷ್ಠ ಬಾಕಿ ಹಣ ಇರಬೇಕು ಎನ್ನುವ ನಿಯಮ ಇರುತ್ತದೆ. ಈ ಮಿನಿಮಮ್ ಬ್ಯಾಲನ್ಸ್ (Minimum Account Balance) ಇಲ್ಲದಿದ್ದರೆ ಪೆನಾಲ್ಟಿ ಹಾಕಲಾಗುತ್ತದೆ. ಆದರೆ, ಶೂನ್ಯ ಬ್ಯಾಲನ್ಸ್ ಇರುವ ಅಕೌಂಟ್ಗಳು ಬಹಳ ಇರುತ್ತದೆ. ಅವುಗಳಿಗೆ ದಂಡ ಹಾಕಿದರೆ ನೆಗಟಿವ್ ಬ್ಯಾಲನ್ಸ್ ಆಗುತ್ತದೆ. ಆ ಬಗ್ಗೆ RBI ಯಾವ ನಿಯಮ ಹೊಂದಿದೆ ಎಂದು ತಿಳಿಯೋಣ.
ಬ್ಯಾಂಕ್ ಗಳು ದಂಡ ವಿಧಿಸುವುದು ಕಡ್ಡಾಯ
ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟಿದ್ದು. ಕೆಲವೊಮ್ಮೆ ಒಂದೇ ಬ್ಯಾಂಕ್ನ ಬೇರೆ ಬೇರೆ ಶಾಖೆಗಳಲ್ಲಿ ಈ ಬಗ್ಗೆ ಭಿನ್ನ ನೀತಿಗಳಿರಬಹುದು. ಗ್ರಾಮೀಣ ಭಾಗದ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ನಗರದ ಬ್ಯಾಂಕುಗಳಲ್ಲಿ ದಂಡ ವಿಧಿಸುವ ಪ್ರವೃತ್ತಿ ಹೆಚ್ಚು.
ಮಿನಿಮಮ್ ಬ್ಯಾಲನ್ಸ್ ಎಣಿಕೆಯ ವಿಧಾನ
ಎಚ್ಡಿಎಫ್ಸಿ, ಎಕ್ಸಿಸ್ ಇತ್ಯಾದಿ ಕೆಲ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ಗಳು ಕನಿಷ್ಠ 10,000 ರೂ ಹಣ ಹೊಂದಿರಬೇಕು ಎನ್ನುವ ನಿಯಮ ಇದೆ. ಇನ್ನೂ ಕೆಲ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ 1,000 ಇರುತ್ತದೆ. ಕೆಲ ಬ್ಯಾಂಕುಗಳು ಶೂನ್ಯ ಬ್ಯಾಲನ್ಸ್ ಸೌಲಭ್ಯ ಇರುವ ಎಸ್ಬಿ ಅಕೌಂಟ್ಗಳಿಗೆ ಅವಕಾಶ ಕೊಡುತ್ತವೆ.
ಒಂದು ತಿಂಗಳಲ್ಲಿ ಒಂದು ಎಸ್ಬಿ ಅಕೌಂಟ್ನ ಮಿನಿಮಮ್ ಬ್ಯಾಲನ್ಸ್ ಎಷ್ಟು ಎಂಬುದನ್ನು ಎಣಿಸಲು ಒಂದು ಕ್ರಮ ಇದೆ. ಪ್ರತೀ ದಿನದ ಅಂತ್ಯದಲ್ಲಿ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಅದನ್ನು ಒಟ್ಟುಗೂಡಿಸಿ, 30 ಅಥವಾ 31 ದಿನಗಳಿಂದ ಅದನ್ನು ಭಾಗಿಸಿ ಸರಾಸರಿ ಮೊತ್ತವನ್ನು ಪಡೆಯಲಾಗುತ್ತದೆ. ಅದೇ ಮಿನಿಮಮ್ ಬ್ಯಾಲನ್ಸ್ ಆಗಿರುತ್ತದೆ.
ದಂಡ ವಿಧಿಸುವ ಬಗ್ಗೆ ಆರ್ಬಿಐ ನ ನಿಯಮ
ಎಸ್ಬಿ ಖಾತೆಯಲ್ಲಿ ಹಣವು ಮಿನಿಮಮ್ ಬ್ಯಾಲನ್ಸ್ ಮಟ್ಟಕ್ಕಿಂತ ಕಡಿಮೆ ಹೋದಾಗ ಬ್ಯಾಂಕುಗಳು ಏಕಾಏಕಿ ದಂಡ ಹಾಕುವಂತಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ಅಥವಾ ಪತ್ರಗಳ ಮೂಲಕವೂ ಸಂವಹನ ನಡೆಸಿ ನೋಟೀಸ್ ನೀಡಬೇಕು. ಮಿನಿಮಮ್ ಬ್ಯಾಲನ್ಸ್ ತುಂಬಲು ಗ್ರಾಹಕರಿಗೆ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನೀಡಬೇಕು.
ಆ ಬಳಿಕವಷ್ಟೇ ದಂಡ ಹಾಕಬಹುದು ಎಂದು ಆರ್ಬಿಐ 2014ರಲ್ಲಿ ರೂಪಿಸಿದ ನಿಯಮದಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಎಲ್ಲಾ ಪ್ರಕರಣದಲ್ಲೂ ಸಮಾನ ರೀತಿಯಲ್ಲಿ ದಂಡ ವಿಧಿಸುವಂತಿಲ್ಲ, ಅಥವಾ ತೀರಾ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವಂತಿಲ್ಲ. ಕನಿಷ್ಠ ಮೊತ್ತಕ್ಕಿಂತ ಎಷ್ಟು ಕಡಿಮೆ ಇದೆ, ಅದಕ್ಕೆ ಅನುಗುಣವಾಗಿ ದಂಡ ವಿಧಿಸಬೇಕು ಎಂದು ಆರ್ಬಿಐ ನಿಯಮ ಹೇಳುತ್ತದೆ.