Master Manjunath: ಮಾಸ್ಟರ್ ಮಂಜುನಾಥ್ ನಟನಗೆ ಗುಡ್ ಬೈ ಹೇಳಿದ್ದು ಯಾಕೆ…? ಅಷ್ಟಕ್ಕೂ ಆಗಿದ್ದೇನು…?
ಮಾಸ್ಟರ್ ಮಂಜುನಾಥ್ ನಟನಗೆ ಗುಡ್ ಬೈ ಹೇಳಿದ್ದು ಯಾಕೆ...?
Master Manjunath About Shankar Nag: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಶಂಕರ್‌ನಾಗ್ (Shankar Nag) ವಿಧಿವಶರಾಗಿ 33 ವರ್ಷಗಳು ಕಳೆದಿವೆ. ಬರೋಬ್ಬರಿ 3 ದಶಕ ಉರುಳಿದರೂ ಇಂದಿಗೂ ಕರುನಾಡಿನ ಜನರ ಮನಸ್ಸುಗಳಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ. ಪ್ರತಿ ವರ್ಷ ಅವರ ಹುಟ್ಟುಹಬ್ಬ, ಪುಣ್ಯತಿಥಿಗೆ ಮಾತ್ರ ಶಂಕರ್‌ನಾಗ್ ಸೀಮಿತವಾಗಿಲ್ಲ. ಅದೆರಾಚೆಗೂ ಅವರು ಬೆರೆತಿದ್ದಾರೆ.
ಇದೇ ಶಂಕರ್‌ನಾಗ್ ರವರ ಜೊತೆ ಮಾಸ್ಟರ್ ಮಂಜುನಾಥ್ (Master Manjunath) 12 ವರ್ಷಗಳ ಕಾಲ ತಮ್ಮ ಸಮಯವನ್ನು ಹಂಚಿಕೊಂಡಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದ ಮಾಸ್ಟರ್ ಮಂಜುನಾಥ ರವರು ಸಾಫ್ಟ್‌ವೇರ್ ಉದ್ಯಮದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹೀಗಿರುವ ಮಾಸ್ಟರ್ ಮಂಜುನಾಥ್, ಶಂಕರ್‌ನಾಗ್ ಅಂಕಲ್ ಬಗ್ಗೆ ಈಗಾಗಲೇ ಬೆಟ್ಟದಷ್ಟು ಮಾತನಾಡಿದ್ದಾರೆ. ಆ ಪೈಕಿ ತಮ್ಮ ಬದುಕಲ್ಲಿ ಶಂಕರ್‌ನಾಗ್ ಹೇಗಿದ್ದರು ಎಂಬ ಕೆಲವು ವಿಚಾರಗಳು ಇಲ್ಲಿವೆ.
ಏನೇ ಆದರೂ ಶೂಟಿಂಗ್ ಕೆಲಸ ನಿಲ್ಲಲು ಬಿಡುತ್ತೀರಲ್ಲ
ಶಂಕರ್ ನಾಗ್ ಅವರಿಂದ ನಾನು ಕಲಿತಿದ್ದು, ನೋಡಿದ್ದು ಏನೆಂದರೆ, ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಬಾರದು. ಅದು ನಡೆಯುತ್ತಲೇ ಇರಬೇಕು. ಬಹುತೇಕ ಯಾರಿಗೂ ಗೊತ್ತಿರಲ್ಲಿಕ್ಕಿಲ್ಲ. ಮಾಲ್ಗುಡಿ ಡೇಸ್ ಶೂಟಿಂಗ್ ಸಂದರ್ಭದಲ್ಲಿ, ಶಂಕರ್‌ನಾಗ್ ಅವರಿಗೆ ಜೋರು ಜ್ವರ. ಜ್ವರದಲ್ಲೂ ಸಹ, ಶೂಟಿಂಗ್ ನಿಲ್ಲಿಸಬೇಡಿ, ನಾನು ರೆಸ್ಟ್ ಮಾಡ್ತಿನಿ ಎಂದಿದ್ದರು. ಜ್ವರದಲ್ಲಿದ್ದರೂ, ಅಲ್ಲಿಯೇ ಕುಳಿಯುಕೊಂಡು ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ಬದಲಾವಣೆ ಮಾಡಿ ಕೊಡುತ್ತಿದ್ದರು. ಒಟ್ಟಿನಲ್ಲಿ ತಲೆ ಹೋದ್ರೂ ಶೂಟಿಂಗ್ ನಿಲ್ಲಬಾರದು. ಕಲೆಯ ವಿಚಾರಕ್ಕೆ ಮತ್ತು ಹಿಡಿದ ಕೆಲಸದ ವಿಚಾರದಲ್ಲಿ ನೂರಕ್ಕೆ ನೂರು ಮನಸಿಟ್ಟು ಮಾಡಬೇಕು ಎನ್ನುತ್ತಿದ್ದರು .
ಸಕ್ಸಸ್ ಯಾವತ್ತೂ ತಲೆಗೆ ಹತ್ತಬಾರದು ಎಂಬುದು ಶಂಕರ್ ನಾಗ್ ನಿಲುವು
ನನ್ನನ್ನು ಹೊಗಳಿದರೆ ಎಲ್ಲಿ ಇವನಿಗೆ ಕೊಂಬು ಬರುತ್ತೋ ಅನ್ನೋ ಮನಸ್ಥಿತಿ ಅವರದ್ದು. ನೀನು ಇಷ್ಟೆಲ್ಲ ಯಶಸ್ಸು ಪಡೆದಿದ್ದೀಯಾ ಅಂತ ನೀನು ಅಂದುಕೊಂಡಿದ್ದರೆ, ಅದನ್ನು ಉಳಿಸಿಕೊಂಡು ಹೋಗುವುದಕ್ಕಾದರೂ ನೀನು ಓದಬೇಕು. ಸ್ಟೇಟ್ ಅವಾರ್ಡ್ ಬಂದ್ರೆ ಏನಾಯ್ತು, ನ್ಯಾಶನಲ್ ಇಂಟರ್‌ನ್ಯಾಶನಲ್ ಅವಾರ್ಡ್ ಬಂದ್ರೆ ಏನಾಯ್ತು.. ಇದನ್ನು ಮಾಡು, ಅದನ್ನು ಮಾಡು ಎನ್ನುತ್ತಲೇ ಇದ್ದರು. ಅದರ ಹಿಂದಿನ ಉದ್ದೇಶ ಇವನಿಗೆ ಸಕ್ಸಸ್ ಯಾವತ್ತೂ ತಲೆಗೆ ಹತ್ತಬಾರದು ಎಂಬುದು. ಈ ಬಾವಿ, ಕೆರೆ ಇದ್ಯಾವುದೂ ಬೇಡ ನೆಕ್ಸ್ಟ್ ವರ್ಷನ್ ಸಮುದ್ರಕ್ಕೆ ಹೋಗೋಣ ಎನ್ನುತ್ತಿದ್ದರು. ಅವರ ಕನಸುಗಳಿಗೆ ಕೊನೇ ಎಂಬುದೇ ಇರುತ್ತಿರಲಿಲ್ಲ.
ಎಲ್ಲರಿಗೂ ಅವರು ಸ್ಟಾರ್ ನನಗೆ ಶಂಕರ್ ಅಂಕಲ್
ಇಡೀ ಜಗತ್ತಿಗೆ ಶಂಕರ್‌ನಾಗ ಎಂದರೆ ದೊಡ್ಡ ಸ್ಟಾರ್. ಆದರೆ ನನ್ನ ಪಾಲಿಗೆ ಶಂಕರ್ ಅಂಕಲ್. ಯಾಕಂದ್ರೆ ನಾವು ತುಂಬ ವರ್ಷಗಳನ್ನೇ ಒಟ್ಟಿಗೆ ಕಳೆದಿದ್ದೇವೆ. ಆಗಿನ ಸಂದರ್ಭದಲ್ಲಿ ಇರೋದ್ರಲ್ಲಿ ಪಾಸಿಟಿವ್ ಅಂಶಗಳನ್ನು ಹುಡುಕುವಂಥವರು. ನೆಗೆಟಿವ್ ಏನಕ್ಕೆ ಬೇಕು ಅಂತಿದ್ರು. ಅವರೊಂದಿಗೆ 12 ವರ್ಷ ಕಳೆದಿದ್ದೇ ನನಗೆ ಖುಷಿ. ಅವರು ಹೇಳಿಕೊಟ್ಟ ಹಾದಿಯಲ್ಲಿಯೇ ಹೊರಟಿದ್ದೇನೆ. ಅದನ್ನೇ ಅನುಸರಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ ಮಾಸ್ಟರ್ ಮಂಜುನಾಥ್.
ಶಂಕರ್ ನಾಗ್ ಸಾವಿಗೂ, ನಾನು ಸಿನಿಮಾ ಬಿಟ್ಟಿದ್ದಕ್ಕೂ ಸಂಬಂಧವಿಲ್ಲ
ನಾನು 10ನೇ ತರಗತಿಗೆ ಬರ್ತಾಯಿದ್ದಂಗೆ ಸಿನಿಮಾ, ಸೀರಿಯಲ್ ಎಲ್ಲ ನಿಲ್ಲಿಸಿದ್ದೆ. ಪೂರ್ತಿ ಗಮನವನ್ನು ಓದಿನ ಕಡೆಗೆ ಕೊಡಬೇಕೆಂದು ನಾನು ಹೇಗೆ ನಿರ್ಧರಿಸಿದ್ದೆನೋ, ಅದೇ ರೀತಿ ನನ್ನ ಬಗ್ಗೆಯೂ ಅವರು ತುಂಬ ವಿಚಾರ ಮಾಡಿದ್ದರು. ಓದು ಮುಗಿದ ಬಳಿಕವೇ ಸಿನಿಮಾ ಮಾಡಬೇಕು ಎಂಬ ಕ್ಲಾರಿಟಿ ನನ್ನಲ್ಲಿತ್ತು. ಆದರೆ ಅವರು ನಿಧನರಾಗಿದ್ದು, ನಾನು 10ನೇ ತರಗತಿಗೆ ಬಂದಿದ್ದು ಒಂದು ರೀತಿ ಕಾಕತಾಳೀಯ. ಅದಾದ ಮೇಲೆ ಕ್ವಾಲಿಟಿಯ ರೋಲ್‌ಗಳು ಸಿಗಲಿಲ್ಲವೇನೋ? ಆದರೆ, ಅವರು ಹೋದರು ಅಂತ ನಾನು ಸಿನಿಮಾ ನಿಲ್ಲಿಸಲಿಲ್ಲ. ಅವರು ಹೋದಮೇಲೋ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಸ್ವಾತಿಕಿರಣಂ ಅನ್ನೋ ತೆಲುಗು ಸಿನಿಮಾ ಮಾಡಿದ್ದೇ. ಕನ್ನಡದಲ್ಲಿ ರಾಮಾಚಾರಿ ನನ್ನ ಲಾಸ್ಟ್ ಸಿನಿಮಾ.
ನನ್ನ ವಿದ್ಯಾಭ್ಯಾಸದ ವಿಚಾರದಲ್ಲಿ ಶಂಕರ್‌ನಾಗ್ ತುಂಬ ಸ್ಟ್ರಿಕ್ಟ್
ನನ್ನ ವಿದ್ಯಾಭ್ಯಾಸದ ವಿಚಾರದಲ್ಲಿ ಶಂಕರ್‌ನಾಗ್ ತುಂಬ ಸ್ಟ್ರಿಕ್ಟ್. ನಾನು ವಿದ್ಯಾಭ್ಯಾಸದ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೆ. ಹಾಗಂತ ಸಿನಿಮಾದಿಂದ ದೂರವೇ ಉಳೀಬೇಕು ಅಂತೇನಿಲ್ಲ. ಬದಲಿಗೆ, ಓದಿನ ಸಮಯದಲ್ಲಿ ಅತ್ತಕಡೆ ಗಮನ ಹರಿಸೋದು ಬೇಡ ಎಂದುಕೊಂಡಿದ್ದೆ. ಓದು ಮುಗಿದ ಬಳಿಕ, ಯಾವ ರೀತಿಯ ಪ್ರಾಜೆಕ್ಟ್ ಸಿಗಬಹುದು? ಅವಕಾಶಗಳು ಹೇಗಿರಬಹುದು? ಎಂದು ನೋಡಿದರಾಯ್ತು ಎಂಬ ಮನಸ್ಥಿತಿಯಲ್ಲಿದ್ದೆ. ನಿಧಾನಕ್ಕೆ ಓದು ಮುಗೀತು.
ಮೊದಲಿಗೆ ಒಂದು ಜಾಹೀರಾತು ಏಜೆನ್ಸಿಗೆ ಸೇರಿಕೊಂಡೆ. ಅಲ್ಲಿಂದ ಸಾಫ್ಟ್‌ವೇರ್ ಕಂಪನಿಗೆ ಹೋದೆ. ಆವತ್ತೇ ಮೊದಲ ಸಲ ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಸಿಗೋತರ ಮಾಡಿದೆ. ಒಂದು ರೀತಿ ಖುಷಿ ಸಿಗ್ತಾ ಹೋಯ್ತು. 3ರಿಂದ 16ರ ವರೆಗೆ ನಾನು ಸಿನಿಮಾದಲ್ಲಿದ್ದವನು. ಸಾಫ್ಟ್‌ವೇರ್ ಜಾಬ್ ನನಗೆ ಒಂದಷ್ಟು ಹೊಸತನವನ್ನು ಕಲಿಸಿತು. ಆ ಕೆಲಸದಲ್ಲಿ ನನ್ನ ನಾರ್ಮಲ್ ಜೀವನವನ್ನೂ ಎಂಜಾಯ್ ಮಾಡುತ್ತಿದ್ದೆ. ಮತ್ಯಾಕೆ ಸಿನಿಮಾಕ್ಕೆ ಬರಲಿಲ್ಲ ಎಂದರೆ ನನ್ನ ಬಳಿ ಉತ್ತರ ಇಲ್ಲ. ಹಾಗಂತ ನಾನು ಅದರಿಂದ ಹೊರಗೆ ಹೋಗಿಲ್ಲ. ಸ್ವಲ್ಪ ದೂರದಲ್ಲಿದ್ದೇನೆ. ನಿರ್ದೇಶನದ ಕನಸಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.